IAFT – INSTITUTION OF AGROFORESTRY FARMERS AND TECHNOLOGISTS

ಬೀಜಗಳ ಸಂಗ್ರಹ:

ಒಣಗಿದ ಹಣ್ಣುಗಳನ್ನು ಜನವರಿ ತಿಂಗಳಿನಲ್ಲಿ ಸಂಗ್ರಹಿಸಿ, ಅವುಗಳು ಒಡೆದುಕೊಳ್ಳುವವರೆಗೂ ಒಣಗಿಸಲಾಗುವುದು. ಆಗ ಬೀಜಗಳನ್ನು ಹಣ್ಣಿನಿಂದ ಬೇರ್ಪಡಿಸಲಾಗುವುದು. ಬೀಜಗಳು ಮೊಳಕೆ ಒಡೆಯಲು ಕಡಿಮೆ ಸಮಯವಿರುತ್ತದೆ. ಸುಮಾರು 80-85 ಕೆ.ಜಿ. ಹಣ್ಣಿನಿಂದ ಒಂದು ಕೆ.ಜಿ. ಬೀಜಗಳನ್ನು ಪಡೆಯಬಹುದು.

ಬೀಜಗಳ ಸಂಸ್ಕರಣೆ ಮತ್ತು ಉಪಚಾರ:

100-500 ಪಿ.ಪಿ.ಎಂ. ಜಿಬ್ಬರಲಿಕ್ ಆಸಿಡ್, 100 ಪಿ.ಪಿ.ಎಂ. ಕೈನೆಟಿನ್, 1% ತಯೋ ಯೂರಿಯಾ, 0.5% ಪೊಟ್ಯಾಶಿಯಮ್ ನೈಟ್ರೇಟ್ ಮತ್ತು ಇತರೆ ಶಿಲೀಂಧ್ರನಾಶಕಗಳಾದ ಅಜೋಸ್ಪೈರಿಲಮ್, ಅಜಟೊ ಬ್ಯಾಕ್ಟರ್ ಮತ್ತು ಟ್ರೈಕೋಡರ್ಮ್ ವಿರಿಡೆ ಇಂದ ಉಪಚರಿಸಬೇಕಿದೆ.

ಸಸ್ಯಕ್ಷೇತ್ರ:

ಬೀಜದಿಂದ ಬೆಳೆಸಿದ ಸಸಿಗಳು, ಕಸಿ ಮಾಡಿದ ಸಸಿಗಳು ಮತ್ತು ಬಡ್ಡಿಂಗ್ಗಳನ್ನು ನೆಡಲು ಉಪಯೋಗಿಸಲಾಗುವುದು. ಬೀಜಗಳಿಂದ ಮತ್ತು ಸಸ್ಯದ ಭಾಗಗಳಿಂದಲೂ ಬೆಳೆಸಬಹುದು. ಬೀಜಗಳಿಂದ ಸಸಿಗಳನ್ನು ಬೆಳೆಸಿದಲ್ಲಿ ವೈವಿಧ್ಯಮಯತೆಯಿಂದ ಸಣ್ಣ ಗಾತ್ರದ ಹಣ್ಣುಗಳನ್ನು ಬಿಡುತ್ತವೆ. ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೀಜಗಳಿಂದಲೇ ಪುನರುತ್ಪತ್ತಿಯಾಗುತ್ತದೆ. ತೋಟಗಳಲ್ಲಿ ಸಾಮಾನ್ಯವಾಗಿ ಕಸಿಗಿಡಗಳು ಅಥವಾ ಬಡೆಡ್ ಗಿಡಗಳನ್ನು ಬಳಸುವರು. ಬಲಿತ ಹಣ್ಣುಗಳನ್ನು ವರ್ಷದ ಡಿಸೆಂಬರ್ ನಿಂದ ಫೆಬ್ರವರಿವರೆಗೆ ಸಂಗ್ರಹಿಸಲಾಗುವುದು ಹಾಗೂ ಬಿಸಿಲಿನಲ್ಲಿ ಹಣ್ಣಿನಿಂದ ಬೀಜಗಳು ಹೊರಗೆ ಬರುವವರೆಗೂ ಒಣಗಿಸಲಾಗುವುದು, ನಂತರ ನೀರಿನಲ್ಲಿ ಹಾಕಿದಾಗ ತೇಲುವ ಬೀಜಗಳನ್ನು ತೆಗೆದು ಹಾಕಿ, ಈ ಬೀಜಗಳನ್ನು ರೂಟ್ ಸ್ಟಾಕ್ ಸಸಿಗಳಾಗಿ ಬೆಳೆಸಲಾಗುವುದು. ಮೊಳಕೆ ಪ್ರಮಾಣವು (viability) ಶೇ.35-50 ರಷ್ಟಿರುತ್ತದೆ. ಮೊಳಕೆಯೊಡೆಯಲು 20 ರಿಂದ 40 ದಿವಸಗಳ ಸಮಯದಿಂದ ತೆಗೆದುಕೊಳ್ಳುವುದು. ಬೀಜಗಳನ್ನು ಮೇಲೆ ತಿಳಿಸಿರುವಂತೆ ಬೀಜೋಪಚಾರ ಮಾಡಬೇಕಿದೆ. ಇದರಿಂದ ಶೇ.70-93 ರಷ್ಟು ಮೊಳಕೆ ಪ್ರಮಾಣವನ್ನು ನಿರೀಕ್ಷಿಸಬಹುದು. ಬೀಜಗಳನ್ನು ಮಾರ್ಚ್-ಏಪ್ರಿಲ್ ನಲ್ಲಿ ಎತ್ತರದ ಮಡಿಗಳಲ್ಲಿ ಅಥವಾ ಪಾಲಿಥೀನ್ ಟ್ಯೂಬ್ / ಬ್ಯಾಗ್ ಗಳಲ್ಲಿ ಬಿತ್ತಬೇಕಿದೆ. ಸಸಿಗಳು 6-12 ತಿಂಗಳು ಬೆಳೆದ ನಂತರ ಕಸಿ ಮಾಡಲು / ಬಡ್ ಕಸಿ ಮಾಡಲು ಬಳಸಬಹುದು.

          ಸಸ್ಯಗಳ (ವೆಜಿಟೇಟಿವ್) ಮುಖಾಂತರ ಅಂದರೆ ಬಡ್ಡಿಂಗ್, ಕಸಿ ಮಾಡುವುದು, ಸಾಫ್ಟ್ ವುಡ್ ಮತ್ತು ಹಾರ್ಡ್ ವುಡ್ ಗ್ರಾಫ್ಟಿಂಗ್ ಮುಖಾಂತರ ಬೆಳೆಸುವುದು ಶೇ.60-90 ರಷ್ಟು ಯಶಸ್ವಿಯಾಗಿ ಸಸಿಗಳನ್ನು ಬೆಳೆಸಬಹುದು.

ನೆಡುತೋಪಿನ ನಿರ್ವಹಣೆ:

ಆಮ್ಲ ಅಥವಾ ನೆಲ್ಲಿಕಾಯಿ ಮರಗಳು ಅರೆ ಉಷ್ಣ ಪ್ರದೇಶ ಮತ್ತು  ಒಣ ಹವೆಯಿರುವ ಪ್ರದೇಶದಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಇದೊಂದು ಗಟ್ಟಿ ಜಾತಿಯ ಮರವಾಗಿದ್ದು, ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದು. ಈ ಮರವು ಉಪ್ಪಿನಂಶವಿರುವ ಮತ್ತು ಕ್ಷಾರಯುಕ್ತ ಮಣ್ಣಿನಲ್ಲಿಯೂ ಸಹ ಉತ್ತಮವಾಗಿ ಬೆಳೆಯುತ್ತದೆ.

          ಪ್ರಾರಂಭಿಕ ಹಂತದಲ್ಲಿ ನೀರನ್ನು ಕೊಡುವುದು ಸೂಕ್ತ. ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ನೀರಾವರಿ ಅವಶ್ಯಕತೆಯಿರುವುದಿಲ್ಲ, ಹನಿ ನೀರಾವರಿ ಪದ್ಧತಿಯಿಂದ ಶೇ.40-45 ರಷ್ಟು ನೀರನ್ನು ಉಳಿಸಬಹುದು.

          ಪ್ರೂನಿಂಗ್ ಮಾಡಿದ ತಕ್ಷಣ ಗಿಡಗಳಿಗೆ ಗೊಬ್ಬರವನ್ನು ಅಂದರೆ ಕೊಟ್ಟಿಗೆ ಗೊಬ್ಬರ, ಎನ್.ಪಿ.ಕೆ 200-500-200 ಗ್ರಾಂ. ಪ್ರತಿ ಮರಕ್ಕೆ ನೀಡಬೇಕಿದೆ. ಕೊಂಬೆಗಳು ಭೂಮಿಯಿಂದ 3 ರಿಂದ 4 ಅಡಿ ಎತ್ತರದಲ್ಲಿರುವಂತೆ ನೋಡಿಕೊಳ್ಳಬೇಕು. ಸಸಿಗಳ ತುದಿಯನ್ನು ಮುರಿಯದಂತೆ ರಕ್ಷಿಸಬೇಕು. 2 ರಿಂದ 4 ರೆಂಬೆಗಳನ್ನು ವಿರುದ್ಧ ದಿಕ್ಕಿನಲ್ಲಿ ಬೆಳೆಯುವಂತೆ ಮೊದಲಿನ ವರ್ಷಗಳಲ್ಲಿ ನೋಡಿಕೊ‍ಳ್ಳಬೇಕು. ಮಾರ್ಚ್ – ಏಪ್ರಿಲ್ ತಿಂಗಳಿನಲ್ಲಿ ಪ್ರೂನಿಂಗ್ ಮಾಡಿ, ರೆಂಬೆಗಳನ್ನು ಕಡಿಮೆಗೊಳಿಸುವುದರಿಂದ ಹೆಚ್ಚು ಹಣ್ಣುಗಳು ಬಿಡಲು ಸಹಕಾರಿಯಾಗುವುದು.

ಅಂತರ:

ನೆಡುತೋಪನ್ನು ಜುಲೈ-ಆಗಸ್ಟ್ ತಿಂಗಳುಗಳಲ್ಲಿ 6ಮೀ X 6ಮೀ ಅಂತರದಲ್ಲಿ, 1ಮೀ X 1 ಘನ ಮೀಟರ್ ಅಥವಾ 1.25ಮೀ X 1.25 ಘನ ಮೀಟರ್ ಅಳತೆಯ ಗುಂಡಿಗಳಲ್ಲಿ ಗಿಡಗಳನ್ನು ನಾಟಿ ಮಾಡಬೇಕು.

ರೋಗ ಮತ್ತು ಕೀಟಗಳ ನಿರ್ವಹಣೆ:

ಸಾಮಾನ್ಯವಾಗಿ ಕಾಂಡ ಊದಿಕೊಳ್ಳುವುದು / ದಪ್ಪವಾಗುವ ರೋಗವನ್ನು ಸರಿಯಾದ ಸಮಯದಲ್ಲಿ ಪ್ರೂನಿಂಗ್ ಮಾಡುವುದರಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಮಾನೋಕ್ರೊಟೊಟೊಪಾಸ್ 2 ಮಿ.ಲೀ.ನ್ನು ಪ್ರತಿ 1 ಲೀ. ನೀರಿನಲ್ಲಿ ಸೇರಿಸಿ ಎರಡು ಬಾರಿ 15 ದಿವಸಗಳ ಅಂತರದಲ್ಲಿ ಸಿಂಪರಿಸಬೇಕು.

ಗಾಲ್ ಹುಳು:

ತುದಿಯಲ್ಲಿ ಸಣ್ಣ ಹುಳುಗಳು ಮಳೆಗಾಲದಲ್ಲಿ ಕಂಡುಬರುತ್ತವೆ ಮತ್ತು ಒಂದು ರೀತಿಯ ಕ್ಯಾನಾಲ್ ನಂತೆ ಕೊರೆಯುತ್ತವೆ. ಇದರಿಂದಾಗಿ ತುದಿಯ ಬೆಳವಣಿಗೆ ಕುಂಠಿತವಾಗಲಿದೆ, ಹಾಗೂ ಪಕ್ಕದಲ್ಲಿ ರೆಂಬೆಗಳ ಗಾಲ್ ನಂತಹ ಸ್ಥಳದ ಕೆಳಭಾಗದಲ್ಲಿ ಬರಲು ಪ್ರಾರಂಭವಾಗುವುದರಿಂದ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿರುವುದಿಲ್ಲ. ಕೀಟಗಳ ಉಪಟಳಕ್ಕೊಳಗಾದ ತುದಿಯ ಭಾಗಗಳನ್ನು ಕತ್ತರಿಸಿ ತೆಗೆಯಬೇಕು ಮತ್ತು ಮುಂಜಾಗ್ರತಾ ಕ್ರಮವಾಗಿ ಶೇ.0.03 ರ ಡೈ ಮಿತೆಯೇಟ್ ದ್ರಾವಣವನ್ನು ಸಿಂಪರಿಸಬೇಕು.

ಸಿಪ್ಪೆಯನ್ನು ತಿನ್ನುವ ಮರಿ ಹುಳಗಳು:

ಇವುಗಳು ಕಾಂಡ ಮತ್ತು ರೆಂಬೆಗಳ ತೊಗಟೆಯನ್ನು ತಿನ್ನುವುದರಿಂದ ನಾಶಪಡಿಸುತ್ತವೆ. ತೊಂದರೆಗೊಳಗಾದ ಭಾಗವನ್ನು ಸ್ವಚ್ಛಗೊಳಿಸಿ ಸೀಮೆ ಎಣ್ಣೆಯ ಹನಿಗಳನ್ನು ರಂಧ್ರಗಳಲ್ಲಿ ಬಿಡುವುದರಿಂದ ನಿಯಂತ್ರಿಸಬಹುದು.

ರಸ್ಟ್ ಅಥವಾ ಕೆಂಪು ಚುಕ್ಕೆ ರೋಗ:

ಎಲೆಗಳಲ್ಲಿ ಮೇಲೆ ಅಲ್ಲಲ್ಲಿ ಕೆಂಪು ರಂಧ್ರಾಕಾರದಲ್ಲಿ ಅಥವಾ ಹೆಚ್ಚಿಗೆ ರಂಧ್ರಾಕಾರದಲ್ಲಿ ಒಟ್ಟೊಟ್ಟಿಗೆ ಮತ್ತು ಕಾಯಿಗಳ ಮೇಲೂ ಸಹ ಕಂಡುಬರುತ್ತವೆ. ಇದಕ್ಕೆ ಶೇ.0.2 ರಷ್ಟು ಮ್ಯಾಂಕೋಜೆಬ್ ಕೀಟನಾಶಕವನ್ನು 7 ರಿಂದ 28 ದಿವಸಗಳ ಅಂತರದಲ್ಲಿ ಜುಲೈ-ಸೆಪ್ಟೆಂಬರ್ ತಿಂಗಳಿನಲ್ಲಿ ಸಿಂಪರಿಸಬೇಕು.

ಕಟಾವಿನ ಅವಧಿ:

15 ರಿಂದ 20 ವರ್ಷಗಳು

ಇಳುವರಿ:

100 ಕೆ.ಜಿ. ಹಣ್ಣುಗಳನ್ನು ಪ್ರತಿ ಮರದಿಂದ ಪಡೆಯಬಹುದು.

ಉಪಯೋಗಗಳು:

ನೆಲ್ಲಿಕಾಯಿಯಲ್ಲಿ ‘ವಿಟಮಿನ್-ಸಿ’ ಯತೇಚ್ಛವಾಗಿದ್ದು ಬಾರ್ ಬಡಾಸ್ ಚೆ‍ರ್ರಿಗಿಂತ ಹೆಚ್ಚಿಗೆ, ಕಿತ್ತಳೆ ಹಣ್ಣಿಗಿಂತ 20 ಪಟ್ಟು ಮತ್ತು ಸೇಬಿಗಿಂತ 160 ಪಟ್ಟು ಹೆಚ್ಚಿರುತ್ತದೆ. ಇದರ ಹಣ್ಣುಗಳಲ್ಲಿ ಮಿನರಲ್ಸ್, ಅಮಿನೋ ಆಸಿಡ್ (5% ಅಲಾನಿನ್, 5% ಲೈಸಿನ್, 14% ಪ್ರೋಲೀನ್ ಮತ್ತು 8% ಆಸ್ಕಾರ್ಬಿಕ್ ಆಸಿಡ್ ಮತ್ತು 29% ಗ್ಲೂಟಾಮಿಕ್ ಆಸಿಡ್) ಸೇಬಿಗಿಂತ ಹೆಚ್ಚಿರುತ್ತದೆ.

          ಹಣ್ಣುಗಳು ಆಮ್ಲೀಯ ಗುಣ ಹೊಂದಿದ್ದು ತಂಪಾಗಿಸುತ್ತದೆ. ಇವುಗಳನ್ನು ಸಕ್ಕರೆ ಕಾಯಿಲೆ, ಕೆಮ್ಮು, ಡೀಸೆಂಟ್ರಿ, ಡಯಾರಿಯಾ, ಪೆಪ್ಟಿಕ್ ಅಲ್ಸರ್, ರಕ್ತ ಹೆಪ್ಪುಗಟ್ಟುವುದು, ರಕ್ತಹೀನತೆ, ಹಳದಿ ರೋಗ, ಹೃದ್ರೋಗ, ತಲೆಹೊಟ್ಟು, ಸಂತಾನೋತ್ಪತ್ತಿ ಅಂಗಗಳ ಮತ್ತು ಶಾರೀರಿಕ ತೊಂದರೆಗಳ ನಿವಾರಣೆಗೆ ಬಳಸಲಾಗುವುದು.

          ಇದರ ಮರವು ಕೆಂಪು ಬಣ್ಣದಿಂದ ಕೂಡಿದ್ದು, ಬೇಗನೆ ಚೊಟ್ಟಾಗುವುದು ಮತ್ತು ಒಡೆದುಕೊಳ್ಳುವುದು. ಹೆಚ್ಚಾಗಿ ಇದ್ದಿಲು ತಯಾರಿಕೆಯಲ್ಲಿ ಬಳಸಲಾಗುವುದು.

ಮಾರುಕಟ್ಟೆ:

ಔಷಧೀಯ ಮತ್ತು ಆಹಾರ ತಯಾರಿಕಾ ಕೈಗಾರಿಕೆಗಳು ಕೊಂಡುಕೊಳ್ಳುತ್ತವೆ.

ಕೊಯ್ಲು:

ನೆಲ್ಲಿಕಾಯಿ ಮರವು ನಾಟಿ ಮಾಡಿದ ಎರಡು ವರ್ಷದ ನಂತರದಲ್ಲಿ ಹಣ್ಣುಗಳನ್ನು ಬಿಡಲು ಪ್ರಾರಂಭಿಸುತ್ತವೆ. ಹಣ್ಣುಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ ಫೆಬ್ರವರಿ ತಿಂಗಳಿನಲ್ಲಿ ಕೊಯ್ಲು ಮಾಡಬಹುದಾಗಿರುತ್ತದೆ. ಬಲಿತ ಹಣ್ಣುಗಳನ್ನು ಸುಲಭವಾಗಿ ಕೀಳಲು ಸಾಧ್ಯವಿಲ್ಲ. ಅವುಗಳನ್ನು ಹೆಚ್ಚಿಗೆ ಅಲುಗಾಡಿಸುವುದರಿಂದ ಅಥವಾ ಬಿದಿರಿನ ಗಳಕ್ಕೆ ಕಬ್ಬಿಣದ ಹುಕ್ ಕಟ್ಟಿಕೊಂಡು ಹಣ್ಣುಗಳನ್ನು ಕೀಳಬೇಕಾಗುವುದು. 10 ವರ್ಷಕ್ಕಿಂತ ಹೆಚ್ಚಿಗೆ ಬೆಳೆದ ಮರಗಳಿಂದ 50 ರಿಂದ 70 ಕೆ.ಜಿ. ಹಣ್ಣುಗಳನ್ನು ಪಡೆಯಲು ಸಾಧ್ಯ. ಸರಾಸರಿ ಹಣ್ಣಿನ ತೂಕವು 50 ರಿಂದ 60 ಗ್ರಾಂ ಇದ್ದು, ಪ್ರತಿ ಕೆ.ಜಿ.ಗೆ 15-20 ಹಣ್ಣುಗಳು ತೂಗುತ್ತದೆ. 70 ವರ್ಷಗಳವರೆಗೂ ಮರಗಳಿಂದ ಇಳುವರಿ ಪಡೆಯಬಹುದು.

ಆರ್ಥಿಕ ಲಾಭ:

ಆರ್ಥಿಕ ಲಾಭವನ್ನು 4 ವರ್ಷಗಳ ನಂತರದಲ್ಲಿ ಪಡೆಯಲು ಸಾಧ್ಯ. ಹಾಗೂ ಪ್ರತಿ ಹೆಕ್ಟೇರ್ ನಿಂದ ರೂ.1,52,000/- ಆದಾಯ ಪಡೆಯಲು ಸಾಧ್ಯ.

ಪ್ರಸ್ತುತ ದರ:

ರೂ. 50-70 ಪ್ರತಿ ಕೆ.ಜಿ.  ಗೆ ದರ ಇರುತ್ತದೆ.